https://youtu.be/qepGLXhQGLM?si=yBAhaf5j5-gJ888c
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತುರುವಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ ಒಬ್ಬ ಮಹಿಳೆಯನ್ನು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ರಾಘವೇಂದ್ರ ಕ್ಯಾಂಪಿನಲ್ಲಿರುವ ಮನೆ ಮೇಲೆ ಪೊಲೀಸರು ದಾಳಿ ನಡೆಸಿದರು.
ದಾಳಿಯ ವೇಳೆ ಶಾಂತಮ್ಮ (69) ಎಂಬ ಮಹಿಳೆ ತಮ್ಮ ಮನೆಯಲ್ಲೇ ಅಕ್ರಮವಾಗಿ ಗಾಂಜಾ ಸಂಗ್ರಹಿಸಿ ಇಟ್ಟಿರುವುದು ಪತ್ತೆಯಾಯಿತು. ಪರಿಶೀಲನೆ ನಡೆಸಿದಾಗ ಸುಮಾರು 1 ಕೆಜಿ 155 ಗ್ರಾಂ ಒಣಗಿದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಗಾಂಜಾದ ಮೌಲ್ಯ ಸುಮಾರು 27,500 ರೂ. ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ರಮವಾಗಿ ಮಾದಕ ವಸ್ತು ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ಶಾಂತಮ್ಮ ವಿರುದ್ಧ ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ನಂತರ ಆರೋಪಿತಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಕಾರ್ಯಾಚರಣೆಯನ್ನು ತುರುವಿಹಾಳ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಖಚಿತ ಮಾಹಿತಿ ಆಧರಿಸಿ ಯಶಸ್ವಿಯಾಗಿ ನಡೆಸಿದ್ದಾರೆ. ಪ್ರದೇಶದಲ್ಲಿ ಮಾದಕ ವಸ್ತುಗಳ ಅಕ್ರಮ ಸಾಗಾಟ ಹಾಗೂ ಮಾರಾಟ ತಡೆಯಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಮುಂದುವರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾದಕ ವಸ್ತುಗಳ ವಿರುದ್ಧ ಕಾನೂನು ಕ್ರಮವನ್ನು ಮತ್ತಷ್ಟು ಕಠಿಣಗೊಳಿಸಲು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ ಮುಂದಾಗಿದೆ.