https://youtu.be/jcwTCoROwQQ?si=uSfvnncxphlzMTe1
ಹೊಸಾ ಬಟ್ಟೆ ಖರೀದಿಸಲು ಒಟ್ಟಿಗೆ ಹೋದ ಮೂವರು ಸ್ನೇಹಿತರಲ್ಲಿ ಓರ್ವ ಅಪ್ರಾಪ್ತ ಬಾಲಕ ಮೃತಪಟ್ಟಿದ್ದು. ಅಪ್ರಾಪ್ತ ಬಾಲಕನನ್ನು ಚೀಲದಲ್ಲಿ ತುಂಬಿ ಕಲ್ಲುಕಟ್ಟಿ ಕೆರೆಯಲ್ಲಿ ಬಿಸಾಡಿದ ಧಾರಣ ಘಟನೆ ಎಂದು ಲಿಂಗಸಗೂರಿನಲ್ಲಿ ಬೆಳಕಿಗೆ ಬಂದಿದೆ. ಆದರೆ ಇದು ಕೊಲೆಯೋ ಅಥವಾ ಸಹಜ ಸಾವೋ ಎಂಬ ಬಗ್ಗೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸ್ನೇಹಿತರ ಕೈಯಲ್ಲಿ ಅಪ್ರಾಪ್ತ ಬಾಲಕನ ಕೊಲೆಯಾದ ದುರ್ಘಟನೆ ಬೆಳಕಿಗೆ ಬಂದಿದೆ. ಭಾನುವಾರ ಬೆಳಿಗ್ಗೆ ಗ್ರಾಮದಿಂದ ಮೂವರು ಸ್ನೇಹಿತರು ಬಟ್ಟೆ ಖರೀದಿಗಾಗಿ ಬೈಕ್‌ನಲ್ಲಿ ಲಿಂಗಸುಗೂರು ಪಟ್ಟಣಕ್ಕೆ ತೆರಳಿದ್ದರು. ಆದರೆ ಸಂಜೆ ವೇಳೆಗೆ ಗ್ರಾಮಕ್ಕೆ ಮರಳಿ ಬಂದಿದ್ದು ಇಬ್ಬರು ಮಾತ್ರ. ಮಗ ಮನೆಗೆ ಮರಳದೇ ಇರುವುದರಿಂದ ಆತಂಕಗೊಂಡ ಪೋಷಕರು ಹಾಗೂ ಗ್ರಾಮಸ್ಥರು ವಿಚಾರಣೆ ಆರಂಭಿಸಿದರು.
ಸ್ನೇಹಿತರೊಂದಿಗೆ ತೆರಳಿದ್ದ ಮಾಹಿತಿ ತಿಳಿದು ಇಬ್ಬರು ಬಾಲಕರನ್ನು ಗ್ರಾಮಸ್ಥರು ಪ್ರಶ್ನಿಸಿದಾಗ ಘಟನೆ ಬಯಲಿಗೆ ಬಂದಿದೆ. ಸ್ನೇಹಿತನಾದ ಕಾರ್ತಿಕ (15)ನನ್ನು ಗೋಣಿ ಚೀಲದಲ್ಲಿ ಕಲ್ಲು ಕಟ್ಟಿ ಕೆರೆಗೆ ಬಿಸಾಡಿದ್ದೇವೆ ಎಂದು ಅವರು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಕಾರ್ತಿಕ 9ನೇ ತರಗತಿಯಲ್ಲಿ ಓದುತ್ತಿದ್ದ ಅಪ್ರಾಪ್ತ ಬಾಲಕನಾಗಿದ್ದು, ಆರೋಪಿಗಳಾದ ಇಬ್ಬರೂ 10ನೇ ತರಗತಿ ವಿದ್ಯಾರ್ಥಿಗಳಾಗಿದ್ದಾರೆ.
ಈ ವಿಷಯ ತಿಳಿದ ತಕ್ಷಣ ಪೋಷಕರು ಆರೋಪಿಗಳನ್ನು ಲಿಂಗಸುಗೂರು ಠಾಣೆಗೆ ಕರೆದುಕೊಂಡು ಹೋಗಿ ಪೊಲೀಸರಿಗೆ ಒಪ್ಪಿಸಿದರು. ಸೋಮವಾರ ಮಧ್ಯಾಹ್ನ ಲಿಂಗಸುಗೂರಿನ ಕರಡಕಲ್ ಕೆರೆಯಿಂದ ಕಾರ್ತಿಕನ ಶವವನ್ನು ಪೊಲೀಸರು ಹೊರತೆಗೆದಿದ್ದಾರೆ. ಈ ಸಂಬಂಧ ಮೃತ ಬಾಲಕನ ತಂದೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಘಟನೆಗೆ ನಿಖರ ಕಾರಣ ಏನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಗ್ರಾಮದಲ್ಲಿ ಈ ಘಟನೆಗೆ ಸಂಬಂಧಿಸಿ ಶೋಕ ವಾತಾವರಣ ನಿರ್ಮಾಣವಾಗಿದೆ.