ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕರಿಗುಡ್ಡ ಗ್ರಾಮದ ಬಳಿ ಟಂಟಂ ಹಾಗೂ ಸರ್ಕಾರಿ ಸಾರಿಗೆ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವರು ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಇನ್ನೂ 13 ಜನರಿಗೆ ಗಾಯಗಳಾಗಿವೆ.
https://youtube.com/shorts/qN2U0-uMw8w?si=GBxXwjIR3AOEItmo
ಮಂಗಳವಾರ ಸಂಜೆ ವೇಳೆಗೆ ತಿಂಥಣಿಯಿಂದ ದೇವದುರ್ಗ ಕಡೆಗೆ ಹೊರಟಿದ್ದ ಸರ್ಕಾರಿ ಸಾರಿಗೆ ಬಸ್, ಕರಿಗುಡ್ಡ ಗ್ರಾಮದ ಬಳಿ ಅದೇ ದಿಕ್ಕಿನಲ್ಲಿ ಸಾಗುತ್ತಿದ್ದ ಟಂಟಂಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಟಂಟಂ ಪಲ್ಟಿಯಾಗಿ ಬಿದ್ದಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದವರು ರಸ್ತೆ ಮೇಲೆ ಎಸೆಯಲ್ಪಟ್ಟಿದ್ದಾರೆ.
ಟಂಟಂನಲ್ಲಿ ಒಟ್ಟು 15 ಜನ ಪ್ರಯಾಣಿಸುತ್ತಿದ್ದು, ಈ ಅಪಘಾತದಲ್ಲಿ ಕರಿಗುಡ್ಡ ಗ್ರಾಮದ ನಿವಾಸಿ ಮಲ್ಲಯ್ಯ (47) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರು ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ರಾಯಚೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಇತರ ಗಾಯಾಳುಗಳನ್ನು ದೇವದುರ್ಗ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತದ ಸುದ್ದಿ ತಿಳಿದ ಕೂಡಲೇ ದೇವದುರ್ಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಕಾರಣವಾದ ಅತಿವೇಗ ಮತ್ತು ನಿರ್ಲಕ್ಷ್ಯ ಚಾಲನೆ ಕುರಿತು ತನಿಖೆ ಕೈಗೊಳ್ಳಲಾಗಿದೆ. ಈ ಘಟನೆ ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪ್ರಕರಣ ದಾಖಲಾಗಿದೆ.