https://youtu.be/Hkmp81FJVAU?si=4omHUjd-V3831MPu
ಬಿಸಿಲಿನ ತೀವ್ರತೆಗೆ ಹೆಸರಾದ ರಾಯಚೂರು ಜಿಲ್ಲೆಯಲ್ಲಿ ಅಚ್ಚರಿ ಮೂಡಿಸುವ ರೀತಿಯಲ್ಲಿ ಭರ್ಜರಿ ಆಲೆಕಲ್ಲು ಮಳೆ ಸುರಿದಿದೆ. ರಾಯಚೂರು ತಾಲೂಕಿನ ಗಿಲ್ಲೆಸುಗೂರು ಕ್ಯಾಂಪ್ ಪ್ರದೇಶದಲ್ಲಿ ಸಂಜೆ ವೇಳೆ ಆಕಸ್ಮಿಕವಾಗಿ ಸುರಿದ ಮಳೆಯೊಂದಿಗೆ ದೊಡ್ಡ ಪ್ರಮಾಣದಲ್ಲಿ ಆಲೆಕಲ್ಲುಗಳು ಬಿದ್ದಿದ್ದು, ಗ್ರಾಮಸ್ಥರು ಗಾಬರಿಗೊಂಡಿದ್ದಾರೆ.
ಸ್ಥಳೀಯರ ಪ್ರಕಾರ ಸುಮಾರು 180 ರಿಂದ 210 ಗ್ರಾಂ ತೂಕದಷ್ಟು ದೊಡ್ಡ ಆಲೆಕಲ್ಲುಗಳು ನೆಲಕ್ಕುರುಳಿದ್ದು, ಈ ದೃಶ್ಯ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ. ಹಿಂದೆಂದೂ ಇಂತಹ ಪ್ರಮಾಣದಲ್ಲಿ ಆಲೆಕಲ್ಲು ಮಳೆ ಕಂಡಿಲ್ಲ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಮಳೆ ನಿಂತ ಬಳಿಕ ಗ್ರಾಮಸ್ಥರು ಬಿದ್ದ ಆಲೆಕಲ್ಲುಗಳನ್ನು ಸಂಗ್ರಹಿಸಿ ರಾಶಿ ಹಾಕಿ ನೋಡುತ್ತಿದ್ದ ದೃಶ್ಯಗಳು ಎಲ್ಲರ ಗಮನ ಸೆಳೆದವು. ಹಲವರು ಆಲೆಕಲ್ಲುಗಳನ್ನು ಕೈಯಲ್ಲಿ ಹಿಡಿದು ಅದರ ಗಾತ್ರ ಮತ್ತು ತೂಕವನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿದರು.
ಇದರಿಂದ ಕೆಲವು ಕಡೆಗಳಲ್ಲಿ ಬೆಳೆಗಳಿಗೆ ಸಣ್ಣ ಮಟ್ಟಿನ ಹಾನಿಯೂ ಉಂಟಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ರಾಯಚೂರು ನಗರದಲ್ಲೂ ದೊಡ್ಡ ಹನಿಗಳೊಂದಿಗೆ ಜೋರು ಮಳೆ ಸುರಿದಿದ್ದು, ಕೆಲ ಹೊತ್ತಿನ ಕಾಲ ವಾತಾವರಣ ತಂಪಾಗಿಸಿತು.
ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಈ ಮಳೆ ತಂಪಿನ ಅನುಭವ ನೀಡಿದರೂ, ಆಲೆಕಲ್ಲು ಮಳೆಯ ದೃಶ್ಯ ಮಾತ್ರ ಜನರಲ್ಲಿ ಅಚ್ಚರಿ ಮೂಡಿಸಿದೆ.