ಮನುಷ್ಯನ ಜೀವನವನ್ನು ಮೌಲ್ಯಮಯಗೊಳಿಸುವ ಅಂಶಗಳಲ್ಲಿ ನಿಷ್ಠೆ, ವಿನಯ ಮತ್ತು ಸೇವಾಭಾವ ಶ್ರೇಷ್ಠ. ಈ ಮೂರನ್ನೂ ಒಂದಾಗಿ ಜೋಡಿಸಿದ ಶಾಶ್ವತ ನಕ್ಷತ್ರವೆಂದರೆ ಶರಣ ಸಂಪ್ರದಾಯದ ಮಹಾನ್ ಶ್ರೇಷ್ಠ ಶರಣ ಮಡಿವಾಳ ಮಾಚಿದೇವ. ಅವರ ಬದುಕು ಕೇವಲ ಹಳೆಯ ಕಾಲದ ಕಥೆಯಲ್ಲ, ಇಂದಿಗೂ ನಮ್ಮ ಹೃದಯದಲ್ಲಿ ಬೆಳಕು ಹಚ್ಚುವ ದೀಪ. ಶರಣ ಮಡಿವಾಳ ಮಾಚಿದೇವರ ಜೀವನವು ಕರ್ನಾಟಕದ ಭಕ್ತಿ ಪರಂಪರೆಯ ಒಬ್ಬ ಮಹಾನ್ ಚರಿತ್ರೆ ಮತ್ತು ಆಧ್ಯಾತ್ಮಿಕ ನಾಯಕ. ಅವರು 12ನೇ ಶತಮಾನದ ಶರಣ ಪರಂಪರೆಯ ಪ್ರಮುಖ ಅಂಶವಾಗಿದ್ದು, ಭಕ್ತಿ, ತತ್ವ, ಮತ್ತು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದವರು. ಅವರ ಜೀವನವು ಪ್ರಜ್ಞಾ, ಪ್ರೀತಿ ಮತ್ತು ಸೇವೆಯ ಮೂಲಕ ರೂಪುಗೊಂಡಿದೆ, ಮತ್ತು ಅವರು ತಮ್ಮ ಶಿಷ್ಯರಲ್ಲಿ ಮತ್ತು ಭಕ್ತರಲ್ಲಿ ಆಧ್ಯಾತ್ಮವನ್ನು ಹರಡಲು ಶ್ರಮಿಸಿದ ವೀರನಿಷ್ಠೆಯ ಶರಣನೀತ.
https://youtu.be/7DpeF6rSGo8?si=HTceiSpTH9XH2Nbi
ವಿಜಾಪುರ ಜಿಲ್ಲೆಯ ಸಿಂಧಗಿ ತಾಲೂಕಿನ ‘ದೇವರ ಹಿಪ್ಪರಗಿಯಲ್ಲಿ’ ಪರುವತಯ್ಯ -ಸುಜ್ನಾನವ್ವ ದಂಪತಿಗಳ ಪುತ್ರ ರತ್ನ -ಶರಣ ಕಿರಣ ಮಡಿವಾಳ ಮಾಚಿದೆವರು. ದೇವರ ಹಿಪ್ಪರಿಗೆ ಈತನ ಜನ್ಮಸ್ಥಳ. ಕಾರ್ಯಕ್ಷೇತ್ರ ಕಲ್ಯಾಣ. ಆರಾಧ್ಯದೈವ ಕಲ್ಲಿನಾಥ. ಕಾವ್ಯ ಪುರಾಣಗಳಲ್ಲಿ ಈತನನ್ನು ವೀರಭದ್ರನ ಅವತಾರ ಎಂದು ಹೇಳುತ್ತಾರೆ. ಮಾಚಯ್ಯನ ತಂದೆ ತಾಯಿ ದೈವನಿಷ್ಠರು, ಬಟ್ಟೆ ಮಡಿಮಾಡುವ ಮಡಿವಾಳ ಕಾಯಕ ಅವರದರು ಕೂಡ ಭವಿಗಳ ಬಟ್ಟೆ ತೊಳೆಯುವವರಲ್ಲ, ಅವರು ಭಾವಿಸಂಗಿಗಳಲ್ಲ,ಲಿಂಗಸಂಗಿಗಳು. ಅಂಗ ಸವೆಯುವ ತನಕ ಲಿಂಗವಂತರ ಉಡುಗೆ- ತೊಡುಗೆ ತೊಳೆಯುವುದು ಅವರ ನಿತ್ಯಕರ್ಮ. ಮುಂದೆ ಮಗನಾದ ಮಾಚಯ್ಯನು ಅದೇ ಶುದ್ಧ ಕಾಯಕ .
ನಿಷ್ಠೆಯ ಪ್ರತಿರೂಪವಾಗಿ ಶರಣರ ಬಟ್ಟೆಗಳನ್ನು ತೊಳೆಯುವುದು, “ಮಡಿ” ಹಾಸಿ ಸ್ವಾಗತಿಸುವುದು, ಬಂದವರ ಮನಸ್ಸನ್ನು ಪರಿಶುದ್ಧಗೊಳಿಸುವುದು—ಇವೆಲ್ಲವೂ ಮಾಚಿದೇವರಿಗೆ ಕೇವಲ ಕೆಲಸವಲ್ಲ; ಆತ್ಮಾರಾಧನೆಯ ಪಾವನ ಪಥ. “ಕಾಯಕವೇ ಕೈಲಾಸ” - ಕೆಲಸವೇ ದೇವರ ಸನ್ನಿಧಿ ನಿತ್ಯ ಪ್ರೇರಣೆ ಎನ್ನುವುದು ಅವರು ನಂಬಿದ್ದ ತತ್ತ್ವ ಬಸವಣ್ಣನ ತತ್ತ್ವವನ್ನು ತಮ್ಮ ದೈನಂದಿನ ಕಾಯಕ ಜೀವನದಲ್ಲಿ ಜೀವಂತವಾಗಿ ಅನುಸರಿಸಿದವರು. ಅವರ ಜನ್ಮವು ಧರ್ಮಪಾಲಕರ ಕುಟುಂಬದಲ್ಲಿ ನಡೆದು, ಅವರು ಮಕ್ಕಳಾಗಿದ್ದಾಗಿನಿಂದಲೇ ಆಧ್ಯಾತ್ಮದ ಕಡೆಗೆ ಆಕರ್ಷಿತರಾಗಿದ್ದರು. ಅವರು ಬಸವಣ್ಣನ ಶಿಷ್ಯನಾಗಿದ್ದು, ಶರಣ ಪರಂಪರೆಯ ಪ್ರಮುಖ ತತ್ವಗಳನ್ನು ಅನುಸರಿಸಿದರು. ಅವರ ಜೀವನದ ಆರಂಭದಿAದಲೇ, ಅವರು ದೇವರ ಸೇವೆ ಮತ್ತು ಸಾಮಾಜಿಕ ನ್ಯಾಯವನ್ನು ಪ್ರತಿಷ್ಠಾಪಿಸಲು ತಮ್ಮನ್ನು ಮೀಸಲಾಗಿಸಿಕೊಂಡಿದ್ದರು. ಇವರ ವಚನಗಳು, ಅಧ್ಯಾತ್ಮ ಮತ್ತು ತತ್ವವನ್ನು ಗಾಢವಾಗಿ ಪ್ರತಿಬಿಂಬಿಸುತ್ತವೆ.
"ನೀನು ನೀನಲ್ಲ, ನಾನು ನಾನು ಅಲ್ಲ" ಎಂಬ ವಚನವು, ಆತ್ಮ ಹಾಗೂ ಪರಮಾತ್ಮ ನಡುವಿನ ಏಕತ್ವವನ್ನು ವ್ಯಕ್ತವಾಗಿಸುತ್ತದೆ. ಅವರು ತಮ್ಮ ಶಿಷ್ಯರಿಗೆ ಮತ್ತು ಭಕ್ತರಿಗೆ ಪ್ರೇರಣೆಯಾದವು, ದೇವರ ಅನುಭವವನ್ನು ಒಳಗೊಂಡು ತಮ್ಮ ಜೀವನವನ್ನು ಶ್ರೇಷ್ಠವಾಗಿಸಲು ಪ್ರೇರಿತ ಮಾಡಿದರು. ಇವರು ತಮ್ಮ ಕಾಲದಲ್ಲಿ ಸಮಾಜದಲ್ಲಿ ನಡೆಯುತ್ತಿದ್ದ ಅನ್ಯಾಯಗಳ ವಿರುದ್ಧ ಧ್ವನಿ ಎತ್ತಿದವರು. ಅವರು ಶೋಷಿತ ವರ್ಗಗಳ ಹಕ್ಕುಗಳನ್ನು ರಕ್ಷಿಸಲು ತಮ್ಮ ಶಿಷ್ಯರಲ್ಲಿ ಸಾಮಾಜಿಕ ಜಾಗೃತಿ ಮೂಡಿಸಿದರು. "ಬಡತನವೇ ಬಂಡವಾಳ, ಆದರೆ ಬಡತನವನ್ನು ದೂರ ಮಾಡಲು ನಾವು ಕೈಜೋಡಿಸುತ್ತೇವೆ" ಎಂದು ಅವರು ಪ್ರಯತ್ತಿಸುತ್ತಿದ್ದರು. ಈ ತತ್ವವು ಅವರು ಸಮಾಜದಲ್ಲಿ ಏಕೀಕೃತತೆಯನ್ನು ಸಾಧಿಸಲು ಈಡಾಗಿತ್ತು.
ಮಡಿವಾಳ ಮಾಚಿದೇವರ ಜೀವನವು ಶರಣ ಪರಂಪರೆಯಲ್ಲಿ ಪ್ರಮುಖರು. ಅವರು ತಮ್ಮ ಜೀವನವನ್ನು ದೇವರ ಸೇವೆ ಮತ್ತು ಮಾನವೀಯತೆಯ ಪರಿಪೂರ್ಣತೆಗೆ ಮೀಸಲಾಗಿಟ್ಟರು. ಅವರ ಶಿಷ್ಯರು ಮತ್ತು ಭಕ್ತರು, ಅವರು ತೋರಿದ ಮಾರ್ಗವನ್ನು ಅನುಸರಿಸಿ, ತಮ್ಮ ಜೀವನವನ್ನು ಧರ್ಮ ಮತ್ತು ಸೇವೆಯ ರೂಪದಲ್ಲಿ ರೂಪಿಸಿದರು. ಮಡಿವಾಳ ಮಾಚಿದೇವರು 12ನೆಯ ಶತಮಾನದ ಶರಣಸಾಹಿತ್ಯದ ಪ್ರಮುಖ ಶರಣರಲ್ಲಿ ಒಬ್ಬರು. ಅವರ ಜೀವನದಲ್ಲಿ ಕಾಣಸಿಗುವ ಹಲವು ಘಟನೆಗಳು ಅವರ ದೈವಭಕ್ತಿ, ಸೇವಾ ಮನೋಭಾವ ಮತ್ತು ಲಿಂಗನಿಷ್ಠೆಯನ್ನು ಸ್ಪಷ್ಟವಾಗಿ ತೋರಿಸುತ್ತವೆ. ಅವುಗಳಲ್ಲಿ ಕೆಲವು ಪ್ರಮುಖ ಘಟನೆಗಳನ್ನೂ ನೋಡೋಣ ನುಲಿಯ ಚಂದಯ್ಯನು ಕೆರೆಯಲ್ಲಿ ಹುಲ್ಲು ಕತ್ತರಿಸುವಾಗ ಧರಿಸಿದ್ದ ಇಷ್ಟಲಿಂಗ ಜಾರಿ ನೀರಿನಲ್ಲಿ ಬಿದ್ದಿತು. “ಭಾವಲಿಂಗವೊAದೇ ಸಾಕು” ಎಂದುಕೊAಡು ಚಂದಯ್ಯನು ಮನೆಗೆ ಮರಳಲು ಯತ್ನಿಸಿದನು. ಆಗ ಲಿಂಗದೇವನು ಮಾಚಿದೇವರ ಮೊರೆ ಹೋಗುತ್ತಾನೆ. ಮಾಚಿದೇವರು, “ಹಣ್ಣು ಬೇಡವೆಂದು ಕೇವಲ ಸವಿಯಷ್ಟೇ ಬೇಕು ಎನ್ನುವುದೆ ಹೇಗೆ?” ಎಂದು ಉಪಮೆ ನೀಡಿ, ಲಿಂಗಪೂಜೆಗಿAತ ಗುರುಪೂಜೆ ಮುಖ್ಯವೆಂದು ತಿಳಿಸುವ ಮೂಲಕ ಚಂದಯ್ಯನ ತಪ್ಪನ್ನು ಅರಿವಿಗೆ ತರುತ್ತಾರೆ.
ಅನುಭವ ಮಂಟಪದಲ್ಲಿ ಮಾಚಯ್ಯ ಅನುಭಾವದ ಮಣಿಯಾಗಿ ಹೊಳೆದ. ಬಂದ ಬಳಗಕ್ಕೆಲ್ಲ ತತ್ವದ ಸವಿ ಅರುಹಿದ. ಅರಿಯದೆ ಮರಹಿನಿಂದ ತೊಳಲಿದವರಿಗೆ ನಿಜದ ನಿಲುವ ತೋರಿದ. ಒಮ್ಮೆ ಬಸವಣ್ಣನವರು “ಬೇಡುವ ಭಕ್ತರಿಲ್ಲದೆ ಬಡವನಾದೆ” ಎಂದು ಅಹಂಕಾರ ಭರಿತವಾಗಿ ಮಾತನಾಡಿದಾಗ, “ಅಹಂಕಾರವಿಟ್ಟವನಲ್ಲ, ಅಹಂ ಹೆಸರು ಬಿಟ್ಟವನಲ್ಲ, ಶಿವನೆ ಮನೆ ಮಾಡುವುದಯ್ಯ.” ಎಂದು ಮಾಚಿದೇವರು “ನೀವು ಒಬ್ಬರೇ ದಾನಿಗಳಿಗೆ ಹುಟ್ಟಿದವರು, ಉಳಿದ ಶರಣರು ಭಿಕ್ಷುಕರು ಎಂದರ್ಥವೇ?” ಎಂದು ಪ್ರಶ್ನಿಸಿದರು. ತಮ್ಮ ಮಾತಿನ ಅಹಂಕಾರವನ್ನು ಬಸವಣ್ಣನು ಮನಗಂಡರು. ಆಗ ಮಾಚಿದೇವರು ತಮ್ಮ ಪಾದದ ನೀರನ್ನು ಚಿಮ್ಮಿದಾಗ, ಆ ನೀರಿನ ಹನಿಗಳು ಮುತ್ತು–ರತ್ನಗಳಾಗಿ ಪರಿವರ್ತನೆಗೊಂಡವು. ಭಕ್ತಿಗೆ ವಿನಯ, ಇಂದ್ರಿಯ ನಿಗ್ರಹ ಮತ್ತು ನಿರಹಂಕಾರವೇ ಲಕ್ಷಣ ಎಂದು ಈ ಘಟನೆಯಿಂದ ಸ್ಪಷ್ಟವಾಯಿತು.
ಮೇದರ ಕೇತಯ್ಯ ಬಿದಿರು ಕಡಿಯುವಾಗ ಎದೆಗೆ ಬಿದಿರು ಮೊಳೆ ಚುಚ್ಚಿ ಪ್ರಾಣಬಿಟ್ಟರು. ಇದನ್ನು ತಿಳಿದ ಬಸವಣ್ಣ, ಮಾಚಿದೇವರನ್ನು ಕರೆಸಿದರು. ಮಾಚಿದೇವರು “ಶಿವಶರಣರ ಪ್ರಾಣವೇ ನನ್ನ ಪ್ರಾಣ” ಎಂದು ನುಡಿದಾಗ, ತಮ್ಮ ವಚನದ ನಿಷ್ಠೆಗಾಗಿ ಬಸವಣ್ಣನೇ ಪ್ರಾಣಬಿಟ್ಟರು. ಅವರ ಆತ್ಮ ಕೇತಯ್ಯನನ್ನು ಹಿಂಬಾಲಿಸಿತು. ಬಸವ ಶಿವಮತದ ಮಣಿ ಎಂದರಿತ ಮಾಚಯ್ಯ ನೆಗೆನೆಗೆದು ವೀರಘಂಟೆ ಬಾರಿಸಿದ. ಮಾಚನ ವೀರಘಂಟೆಯ ನಾದ ದಿಕ್ಕು ದಿಕ್ಕುಗಳಿಗೆಲ್ಲ ತಾಗಿ ಗಡಚಿಕ್ಕಿ ಶಿವನೆದ್ದ.
ನೂಕುವನು ಶಿವಲೋಕ ತೂಕ ಹಿಡಿಯಲು ಕಷ್ಟ ।
ಸಾಕು ಮಾಚಯ್ಯ ತಡೆನಿಲ್ಲು ! ಅನ್ನುದಕೆ
ತೂಕಡಿಸಿ ಬಸವ ಕೇಳಿದ್ದು ॥
ತನ್ನ ವೀರಘಂಟೆಯ ನಾದದಿಂದಲೇ ಬಸವಣ್ಣನವರ ಪ್ರಾಣವನ್ನು ಮರಳಿ ತಂದ ಮಹಾಮಹಿಮ ಮಾಚಯ್ಯ. ಈ ನಿಷ್ಠೆಯನ್ನು ನೋಡಿ ಶಿವನು ದ್ವಂದ್ವ ಪ್ರಾಣಗಳನ್ನು ಮರಳಿ ನೀಡಿದನೆಂಬ ಖ್ಯಾತಿಯು ಇವರದ್ದಾಗಿದೆ. ಅದಕ್ಕೆ ಬಸವಣ್ಣನವರು ಹೇಳುತ್ತಾರೆ-
ಎನ್ನ ಕಾಯವ ಶುದ್ಧವ ಮಾಡಿದಾತ ಮಡಿವಾಳ,
ಎನ್ನ ಮನವ ನಿರ್ಮಳವ ಮಾಡಿದಾತ ಮಡಿವಾಳ, ಎನ್ನಂತರಂಗವ ಬೆಳಗಿದಾತ ಮಡಿವಾಳ, ಎನ್ನ ಬಹಿರಂಗವ ಬಿಡಿಸಿದಾತ ಮಡಿವಾಳ. ಕೂಡಲಸಂಗಮದೇವಾ,
ಎನ್ನ ನಿಮಗೆ ಯೋಗ್ಯನ ಮಾಡಿದಾತ ಮಡಿವಾಳ.
ಅಲ್ಲಮಪ್ರಭುದೇವರು, ಚೆನ್ನಬಸವಣ್ಣನವರು, ಸಿದ್ಧರಾಮೇಶ್ವರರಾದಿಯಾಗಿ ಎಲ್ಲ ಶರಣರೂ ಮಾಚಯ್ಯನ ವ್ಯಕ್ತಿತ್ವಕ್ಕೆ ಮಾರು ಹೋಗಿದ್ದರು. ಶರಣ ಶರಣರಿಗೆಲ್ಲ ಶರಣೆನ್ನುವ ಶಿವಶರಣ ಮಾಚಯ್ಯ, ಶರಣರಲ್ಲಿಯೇ ಗುಣವಂತನೂ ವಾಗ್ನಿಯೂ ಆಗಿದ್ದನು. ಅನುಭವ ಮಂಟಪದ ಚರ್ಚೆಯ ವಚನಗಳು ಮಾಚಯ್ಯನ ಘನ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತವೆ.
ಅನುಭವ ಮಂಟಪ ನಿರ್ಮಾಣದಲ್ಲಿ ಮಾಚಿದೇವರ ಸೇವೆ ಅಪಾರ. ದೇಶದ ನಾನಾ ಭಾಗಗಳಿಂದ ಕಲ್ಯಾಣಕ್ಕೆ ಬರುವ ಶರಣರನ್ನು ಪರೀಕ್ಷಿಸಿ, “ಮಡಿ” ಹಾಸಿ ಗೌರವದಿಂದ ಸ್ವಾಗತಿಸುವ ಹೊಣೆಗಾರಿಕೆ ಇವರದಾಗಿತ್ತು. ಅವರ ಅನುಮತಿ ಇಲ್ಲದೆ ಯಾರಿಗೂ ಅನುಭವ ಮಂಟಪ ಪ್ರವೇಶಕ್ಕೆ ಅವಕಾಶವಿರಲಿಲ್ಲವೆಂಬುದು ಇವರ ಆ ಕಾಲದ ಶರಣ ಸಂಪ್ರದಾಯದ ಶ್ರದ್ಧೆಯನ್ನು ತೋರುತ್ತದೆ.
“ಬಟ್ಟೆ ತೊಳೆಯುತ ಲಿಂಗನು ಜಪಿಸುತೆನಯ್ಯ,
ಕೈಯ ಕಾಯಕವೆ ನನ್ನ ಕಾವ್ಯವಯ್ಯ.”
ಈ ಪಂಕ್ತಿಗಳಲ್ಲಿ ಕಾಣುವ ಶ್ರಮ–ಭಕ್ತಿ ಸಮ್ಮಿಲನವೇ ಅವರ ಬದುಕಿನ ನಿಜವಾದ ಚಿತ್ರಣ.
ಹಿಪ್ಪರಗಿಯಿಂದ ಕಲ್ಯಾಣಕ್ಕೆ ನಡೆದು ಬರುವಾಗ ಭೀಮರತಿ ನದಿಯಲ್ಲಿ ಪ್ರವಾಹ ಹೊಳೆಯುತ್ತಿದ್ದರೂ, ಶಿವಸ್ಮರಣೆಯ ಬಲದಿಂದ ನದಿ ಎರಡಾಗಿ ವಿಭಜನೆಯಾಯಿತು. ಬಿಜ್ಜಳನು ಬಸವಣ್ಣನಿಗೆ ದುಂಬಾಲು ಹಾಕಿ ಮಡಿದ ಬಟ್ಟೆಗಳ ಗಂಟನ್ನು ಮಾಚಿದೇವರಿಗೆ ಕಳಿಸಿದಾಗ, ಅವರು ಪರಮಭಕ್ತನೆಂಬುದನ್ನು ಅರಿಯದೆ ಅವಮಾನ ಮಾಡಿದ ಪರಿಣಾಮ, ಗಂಟು ಸ್ವತಃ ಉದುರಿ ಹೋಯಿತು. ಇದರಿಂದ ಕೋಪಗೊಂಡ ಬಿಜ್ಜಳನು ಕುಂಟರು–ಕುರುಡರನ್ನು ಕಳುಹಿಸಿದರೂ, ಮಾಚಿದೇವರು ಅವರ ಕಣ್ಣು ಮತ್ತು ಕಾಲುಗಳಿಗೆ ಶಕ್ತಿ ನೀಡಿ ಆರೋಗ್ಯವಂತರನ್ನಾಗಿ ಕಳುಹಿಸಿದರು. ಇನ್ನಷ್ಟು ಕೋಪಗೊಂಡ ಬಿಜ್ಜಳನು ಆನೆಯನ್ನು ಮತ್ತು ಸೈನಿಕರನ್ನು ಕಳುಹಿಸಿದಾಗ, ಮಾಚಿದೇವರು ಅದನ್ನೂ ಜಯಿಸಿದರು.
ಳಬಿಜ್ಜಳನಿಗೆ ಅವಮಾನವಾಯಿತು. ಈ ದುಷ್ಟ ಮಾಚನಿಗೆ ನೀರು ಸಿಗದಂತೆ ಮಾಡುವೆನೆಂದು ಶಪಥ ಮಾಡಿದ. ಸೈನಿಕರ ಕರೆದು ಪಟ್ಟಣದ ಕೆರೆ ತೊರೆಗಳಿಗೆಲ್ಲ ಕಾವಲಿಡಿಸಿದ. ಮುಂಜಾನೆದ್ದು ಮಾಚಯ್ಯ ಮಡದಿಯ ಜೊತೆಗೂಡಿ ಕಾಯಕಕ್ಕೆ ಹೊರಟ. ಯಾವ ಕೆರೆಗೆ ಹೋದರೂ ಸೈನಿಕರ ಕಾವಲು. ತೊರೆಗೆ ಹೋದರೆ ಅಲ್ಲಿಯೂ ಕಾವಲು. ಹೊತ್ತು ಮುಳುಗುವವರೆಗೂ ಸುತ್ತಿ ಸುತ್ತಿ ಬಳಲಿದ. ನೀರು ಸಿಗಲಿಲ್ಲ. ಕಾಯಕ ಭಂಗವಾಗುವುದೆAದು ಹಳಹಳಿಸಿದ. ಹೊತ್ತು ಮುಳುಗುವ ಮೊದಲು ಶರಣರ ಬಟ್ಟೆ ಮಡಿಮಾಡಿ ಕೊಡುವೆನೆಂಬ ನನ್ನ ಸತ್ಯವಿಂದು ಹುಸಿಯಾಯಿತು. ಇವತ್ತಿಗೆ ನನ್ನ ಕಾಯಕದ ಬುತ್ತಿ ತೀರಿತೆಂದು ಕುಗ್ಗಿಹೋದ. ಗಂಡನ ಅವಸ್ಥೆ ಕಂಡು ಹೆಂಡತಿ ಹಲುಬಿದಳು. ಯೋಚಿಸಿ, ಗಂಡನಿಗೊAದು ಸಲಹೆ ಕೊಟ್ಟಳು- ಪರಿತಪಿಸಬೇಡಿ ಪತಿದೇವ, ಇನ್ನು ನಮಗೆ ನೀರು ಸಿಗದು. ನನ್ನ ಎದೆ ಬಗೆದು, ನನ್ನೆದೆಯ ರಕ್ತದಿಂದ ಶರಣರ ಬಟ್ಟೆ ಮಡಿ ಮಾಡಿಕೊಡಿ ಎಂದು ಹೇಳಲು ಕಾಯಕ ನಿಂದಿತ್ತು, ಇನ್ನು ಈ ಶರೀರವಾದರೂ ಏತಕ್ಕೆ ಬೇಕು. ಲಿಂಗಪೂಜೆಯಗೈದು ಲಿಂಗದೊಳೊAದಾಗಬೇಕು. ಸತಿಪತಿಗಳಿಬ್ಬರೂ ಲಿಂಗಪೂಜೆಗೆ ಕುಳಿತರು. ಎಷ್ಟು ಹೊತ್ತಾದರೂ ಏಳಲೇ ಇಲ್ಲ. ಲಿಂಗದೊಳು ನೆಟ್ಟ ದೃಷ್ಟಿ ಕದಲಲಿಲ್ಲ. ದಿನಗಳೆದು ಕತ್ತಲಾಯಿತು. ಬಟ್ಟೆ ಮಡಿ ಮಾಡಲು ಹೋದ ಮಾಚಯ್ಯ ಇನ್ನೂ ಬಂದಿಲ್ಲ. ಶರಣ ಶರಣರಿಗೆಲ್ಲ ದಿಗಿಲು. ಕಾರ್ಗತ್ತಲೆಯ ರಾತ್ರಿ ಕಳೆದು ಬೆಳಕು ಹರಿದು ಬಂತು. ಮಾಚಯ್ಯನ ಸುಳಿವೇ ಇಲ್ಲ. ಮಾಚನೆಲ್ಲಿಹನೆಂದು ಹುಡುಕಾಡಿ ಪೂರ್ವ ದಿಗಂತದಿAದ ರವಿ ಉದಿಸಿ ಬಂದ. ಶರಣ ಶರಣರೆಲ್ಲ ಬಂದು ಸೇರಿದರು. ಕುಳಿತಿದ್ದ ಮಾಚಯ್ಯ ಕದಲಲಿಲ್ಲ.ಆತನ ಮಡದಿ ಕದಲಲಿಲ್ಲ. ಅದೆಂತಹ ಪೂಜೆ-
ಶರಣ ಮಾಚನ ಪೂಜೆ, ಹರಣ ಹಾರುವವರೆಗೆ
ಮರಣವೇ ಬರಲಿ ಮನೆಯೊಳಗೆ | ಮಾದೇವ
ಕರುಣದೀ ಕಾಯೋ ಶರಣರ ॥
ಜನಜಂಗುಳಿಯ ಪರಿವೆ ಇಲ್ಲ. ಗದ್ದಲ ಗಲಾಟೆಗಳೊಂದರ ಅರಿವೆ ಇಲ್ಲ. ಹಾಗೆಯೇ ಕುಳಿತಿದ್ದರು ದಂಪತಿಗಳಿಬ್ಬರು. ಸೇರಿದ್ದ ಜನರಿಗೋ ಇನ್ನೇನಾಗುವುದೆಂಬ ಆತಂಕ. ಮಾಚಯ್ಯನ ದೃಢಭಕ್ತಿ ಗೆದ್ದಿತ್ತು-
ಅಂಗದೊಳು ಬೆರೆತಿರುವ । ಲಿಂಗವೇ ಕೈಯೊಳಗೆ |
ಸಂಗನೇ ಸೇರಿರುವ ಲಿಂಗದ | ತಲೆಯಿಂದ
ಗAಗಿಯು ತುಂಬಿ ಹರಿದಾಳ |
ಇದೇನಾಶ್ಚರ್ಯ. ಪೂಜೆಗೆ ಕುಳಿತ ಮಾಚಯ್ಯನ ಕೈಯೊಳಗಿನ ಲಿಂಗದ ತಲೆ ಬಿರಿದು ಗಂಗೆ ಹರಿಯಬೇಕೇ? ಸೇರಿದ ಶರಣರೆಲ್ಲ ಶರಣು ಶರಣೆಂದು ಕೂಗಿದರು. ಎತ್ತೆತ್ತಲೂ ಮಾಚಯ್ಯನ ಜಯಘೋಷ, ಮಾಚಯ್ಯನೆಂದರೆ ನಂಬಿಗೆಯ ಧೀರ. ಮುಂಬರುವ ಸ್ಥಿತಿಗತಿಗೆ ಮಾಚಯ್ಯನೇ ಆಧಾರವಾಗಿ ನಿಲ್ಲಬೇಕು. ಅವನಿಂದಲೇ ಶರಣರಿಗೆ ಶ್ರೀರಕ್ಷೆ ಎಂದು ಶರಣರೆಲ್ಲ ಹೊಗಳಿದರು. ಅಂತಿಮವಾಗಿ ಅವರ ಮಹಿಮೆಯನ್ನು ಅರಿತ ಬಿಜ್ಜಳನು ಮಾಚಿದೇವರ ಶರಣಾಗತನಾದನು. ಒಟ್ಟಾರೆಯಾಗಿ ಹೇಳಬೇಕೆಂದರೆ “ಶರಣರ ನಾಮದ ಬಲ, ಭಯವನ್ನರಿಯದು,ಶಿವಶಕ್ತಿ ಹೃದಯವ ಕಾಪಾಡುತಿರೆ.” ಈ ಪಂಕ್ತಿಗಳಲ್ಲಿ ಕಾಣುವ ಪರಿಶ್ರಮ–ಭಕ್ತಿ ಸಮ್ಮಿಲನವೇ ಅವರ ಬದುಕಿನಲ್ಲಿ ನಿಜವಾದ ಭಕ್ತನ ಮನದ ಸ್ಥೈರ್ಯವನ್ನು ಸಾರುವ ಚಿರಸ್ಮರಣೀಯ ಘಟನೆಗಳು.

ಮುಂದೆ ‘ಕಲ್ಯಾಣ ಕ್ರಾಂತಿ’ಯ ಸಂದರ್ಭದಲ್ಲಿ ಮಾಚಿದೆವರು ಹೊತ್ತ ‘ಜವಾಬ್ಧಾರಿ’ ಗುರುತರವಾದುದು. ಶರಣ ಧರ್ಮ ಸಂರಕ್ಷಣೆ- ವಚನ ಸಾಹಿತ್ಯದ ರಕ್ಷಣೆಯ ದಂಡ ನಾಯಕತ್ವ ಜವಾಬ್ಧಾರಿ ಹೊತ್ತು , ಚನ್ನ ಬಸವಣ್ಣ , ಅಕ್ಕ ನಾಗಮ್ಮ, ಕಿನ್ನರಿ ಬೊಮ್ಮಣ್ಣ ಮೊದಲಾದವರೊಂದಿಗೆ ಮಾಚಿದೇವ ಶರಣ ಸಮೂಹದ ‘ಭೀಮ ರಕ್ಷಯಾಗಿ’ ನಿಂತರು. ಕಲಚೂರ್ಯ ರಾಯ ಮುರಾರಿಯನ್ನು ಎದುರಿಸಿ ಭೀಮ ನದಿಯನ್ನು ದಾಟಿ ತಲ್ಲೂರು, ಮುರಗೋಡ, ಕಡಕೋಳ,ತಡ ಕೋಡ, ಮೂಗ ಬಸವ, ಕಾತರವಳ್ಳಿಯಲ್ಲಿ ಅಲ್ಲಲ್ಲಿ ಕಾಳಗ ನಡೆಸಿದರು. ತಮ್ಮ ಧೈರ್ಯ, ಅನುಪಮ ಬಲದಿಂದ ಶರಣರನ್ನು, ವಚನ ಸಾಹಿತ್ಯವನ್ನು ರಕ್ಷಿಸಿದ ಸಾಹಸಿ ಮಾಚಯ್ಯ. ಉಳವಿಗೆ ಹೋಗುತ್ತಿರುವಾಗಲೆ ಮಾರ್ಗ ಮಧ್ಯದ ಮುರಗೋಡದ ಹತ್ತಿರವಿರುವ ಕಾರಿಮಣಿಯಲ್ಲಿ ಲಿಂಗೈಕ್ಯರಾದರು. ನಿಷ್ಠೆ ನಮಗೆ ಸತ್ಯದ ದಾರಿಯ ಮೇಲೆ ನಿಲ್ಲಲು ಶಕ್ತಿ ಕೊಡುತ್ತದೆ, ವಿನಯ ನಮ್ಮ ಹೃದಯವನ್ನು ಮೃದುವಾಗಿಸಿ, ಸಂಬAಧಗಳನ್ನು ಪವಿತ್ರಗೊಳಿಸುತ್ತದೆ, ಸೇವೆ ಮಾನವೀಯತೆಯ ಸುಗಂಧವನ್ನು ಹರಡುತ್ತದೆ ಎನ್ನುವ ಮಾತುಗಳು ನಾವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಪ್ರಾಮಾಣಿಕತೆ, ಪ್ರೀತಿ ಮತ್ತು ಭಕ್ತಿಯನ್ನು ಸೇರಿಸಿದಾಗ ನಮ್ಮ ಜೀವನವೇ ದೇವಾಲಯವಾಗುತ್ತದೆ ಎಂಬುದನ್ನು ಮಾಚಿದೇವರು ತಮ್ಮ ಬದುಕಿನಿಂದಲೇ ದಿನನಿತ್ಯದ ಸರಳ ಕಾಯಕವನ್ನೇ ದೈವಸೇವೆಯಾಗಿ ನೋಡಿದ ಅವರ ದೃಷ್ಟಿ ಮಹತ್ತರವಾದುದು.
ಮಡಿವಾಳ ಮಾಚಿದೇವರ ಜೀವನವು ಕೇವಲ ಹಳೆಯ ಕಾಲದ ದೈವಭಕ್ತಿಯ ಕಥೆಯಲ್ಲ, ಅದು ಇಂದಿನ ಸಮಾಜಕ್ಕೂ ಮಾರ್ಗದರ್ಶನ. ಅವರ ನಿಷ್ಠೆ, ಕಾಯಕಶೀಲ, ಭಕ್ತಿಭಾವ ಇವು ಪ್ರತಿಯೊಬ್ಬರಿಗೂ ಶ್ರದ್ಧೆ, ಸೇವೆ ಮತ್ತು ಸಮಾನತೆಯ ಪಾಠ ಕಲಿಸುತ್ತವೆ. ಮಾಚಿದೇವರ ಜೀವನದ ಮತ್ತೊಂದು ವಿಶಿಷ್ಟ ಅಂಶ ಸಮಾನತೆಯ ಬೋಧನೆ. ಜಾತಿ, ಧನ, ಪದವಿ ಎನ್ನದೆ ಪ್ರತಿಯೊಬ್ಬನಲ್ಲೂ ಒಂದೇ ದೈವಸ್ಪಂದನ ಇದೆ ಎಂಬ ನಂಬಿಕೆಯೊAದಿಗೆ ಎಲ್ಲರೊಂದಿಗೆ ಆತ್ಮೀಯವಾಗಿ ನಡೆದುಕೊಂಡರು. ತನ್ನ ವೃತ್ತಿಯನ್ನು “ಹೀನ” ಎಂದು ಕೆಣಕಿದವರಿಗೂ, “ದೇವರ ಪ್ರಸಾದಕ್ಕಾಗಿ ಶುದ್ಧ ಮನಸ್ಸಿನಿಂದ ಮಾಡಿದ ಕೆಲಸವೇ ಶ್ರೇಷ್ಠ” ಎಂದು ಧೈರ್ಯದಿಂದ ಉತ್ತರಿಸಿದರು. ಮಡಿವಾಳ ಮಾಚಿದೇವರ ಜೀವನವು ಹಳೆಯ ಕಾಲದ ದೈವಭಕ್ತಿಯ ಕಥೆಯಲ್ಲ—ಇದು ನಿತ್ಯ ಪ್ರೇರಣೆಯ ದೀಪ. ಮಡಿವಾಳ ಮಾಚಿದೇವನು ಶರಣ ಚಳುವಳಿಯಲ್ಲಿನ ಒಂದು ಘನಮಣಿ. ಬಸವ, ಅಲ್ಲಮ, ಸಿದ್ಧರಾಮರ ಹಾದಿಯಲ್ಲಿ ನಡೆದು, ತಾನು ಮಾಡಿದ ವಚನಗಳ ಮೂಲಕ ಮಾನವತೆಗೆ ಅಮರವಾದ ಸಂದೇಶ ಕೊಟ್ಟ ಶರಣ.

ಡಾ.ಅರುಣಾ ಹಿರೇಮಠ,
ಮುಖ್ಯಸ್ಥರು ಹಿಂದಿ ವಿಭಾಗ,
LVD ಮಹಾವಿದ್ಯಾಲಯ,
ರಾಯಚೂರು.